Sodematha

"ಮನೆ ಮನೆಗಳಲ್ಲಿ ಶ್ರೀಲಕ್ಷ್ಮೀ ಶೋಭಾನೆ ಪಠಣ ಯಜ್ಞ"

07 Dec, 2019

"ಮನೆ ಮನೆಗಳಲ್ಲಿ ಶ್ರೀಲಕ್ಷ್ಮೀ ಶೋಭಾನೆ ಪಠಣ ಯಜ್ಞ"ಸೋದೆ ಕ್ಷೇತ್ರದಲ್ಲಿ ಭಾವಿಸಮೀರ ಶ್ರೀವಾದಿರಾಜಗುರುಸಾರ್ವಭೌಮರಿಗೆ ನೂತನವಾದ ಶಿಲಾ ಮಂದಿರ ನಿರ್ಮಾಣವಾಗುತ್ತಿದ್ದು , ಆ ಪ್ರಯುಕ್ತ ಶ್ರೀವಾದಿರಾಜರಿಂದ ರಚಿತವಾದ ಶ್ರೀಲಕ್ಷ್ಮೀ ಶೋಭಾನೆಯನ್ನು  ನಾಡಿನ ಎಲ್ಲಾ ಭಕ್ತರ ಮನೆ ಮನೆಗಳಲ್ಲಿ ಪ್ರಚಾರಮಾಡುವ ಸಂಕಲ್ಪವನ್ನು  ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಮಾಡಿದ್ದಾರೆ. ಮಂತ್ರತುಲ್ಯವಾದ ಶ್ರೀಲಕ್ಷ್ಮೀಶೋಭಾನೆ ಕೃತಿ ಕರ್ತೃಗಳಾದ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರಿಗೆ ನೂತನ ಶಿಲಾ ಮಂದಿರ ನಿರ್ಮಾಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ,  ಶ್ರೀಲಕ್ಷ್ಮೀಶೋಭಾನೆಯನ್ನು ಪಠಿಸಿ ಅಭೀಷ್ಟವನ್ನು ಪೂರೈಸಿಕೊಂಡ ಎಲ್ಲಾ ಸದ್ಭಕ್ತರಿಗೆ ಶ್ರೀವಾದಿರಾಜರಿಗೆ ಕೃತಜ್ಞತೆಯನ್ನು ಸಲ್ಲಿಸುವ ಮಹಾಭಾಗ್ಯ ....!ಆ ಪ್ರಯುಕ್ತ ಬೆಂಗಳೂರು ದಕ್ಷಿಣ ವಲಯದ ಅಭಿಯಾನದ ಉದ್ಘಾಟನೆಯನ್ನು ಬೆಂಗಳೂರಿನ ಶಾಖಾಮಠವಾದ ನ.ರಾ.ಕಾಲೋನಿಯ ಶ್ರೀಲಕ್ಷ್ಮೀಹಯಗ್ರೀವ ದೇವಸ್ಥಾನದಲ್ಲಿ  ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು  ಡಿಸಂಬರ್ ೩ರಂದು ನೆರವೇರಿಸಿದರು. ದೀಪಪ್ರಜ್ವಾಲನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಠದ ವಿದ್ವಾಂಸರಾದ ಶ್ರೀವೇಂಕಟೇಶ ಕುಲಕರ್ಣಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಶ್ರೀಪಾದಂಗಳವರ ನಾನಾ ಕಾರ್ಯಕ್ರಮಗಳ ಬಗ್ಗೆ ಕಿರುಪರಿಚಯ ನೀಡಿದರು. ಶ್ರೀಪಾದಂಗಳವರು ತಮ್ಮ ಅನುಗ್ರಹ ಸಂದೇಶದಲ್ಲಿ  ಸಮಾಜಕ್ಕೆ ಶ್ರೀವಾದಿರಾಜರ ನಾನಾ ಕೊಡುಗೆಗಳ ಬಗ್ಗೆ ವಿವರಿಸಿದರು. ಕನ್ನಡ, ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಂತೂ  ಶ್ರೀರಾಜರ  ಕೊಡುಗೆ ಅಪಾರ. ಅದಲ್ಲದೇ   ಕೃಷಿ ಕ್ಷೇತ್ರ, ಪಾಕಶಾಸ್ತ್ರ, ಶಿಲ್ಪಶಾಸ್ತ್ರಕ್ಕೂ ಶ್ರೀರಾಜರು ವಿಶಿಷ್ಠವಾದ ಕೊಡುಗೆ ನೀಡಿದ್ದಾರೆ. ಅಂತಹ ಮಹಾನ್ ಕಾರುಣ್ಯಮೂರ್ತಿಗೆ ಕೃತಜ್ಞತೆ ಸಲ್ಲಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯ ಎಂದು ಶ್ರೀಪಾದಂಗಳವರು ನೆರೆದಿದ್ದ ಭಜನಾಮಂಡಳಿಯವರಿಗೆ ಕರೆ ನೀಡಿದರು.  ನಂತರ ಶ್ರೀಪಾದಂಗಳವರು ಪ್ರತೀ ಭಜನಾ ಮಂಡಳಿಯವರಿಗೂ ಶ್ರೀಹಯಗ್ರೀವ ದೇವರ ಮತ್ತು ಶ್ರೀರಾಜರ  ಚಿತ್ರಗಳೊಂದಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.  25ಕ್ಕೂ ಹೆಚ್ಚಿನ ಭಜನಾ ಮಂಡಳಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಲಕ್ಷ್ಮೀಶೋಭಾನೆಯ ಪ್ರಚಾರದೀಕ್ಷೆಯನ್ನು ಪಡೆದರು.